ಹೆನ್ರಿ ದೊರೆಗಳು 
	ಹೆನ್ರಿ 1: 1068-1135. ಇಂಗ್ಲೆಂಡಿನ ರಾಜ (1100-1135). ವಿಲಿಯಂ ದಿ ಕಾನ್‍ಕರರ್‍ನ ಮೂರನೆಯ ಮಗ ಹಾಗೂ ಎರಡನೆಯ ವಿಲಿಯಮ್‍ನ ಕಿರಿಯ ಸಹೋದರ. ಎರಡನೆಯ ವಿಲಿಯಮ್‍ನ ನಿಧನಾನಂತರ ತಂದೆ ಜೊತೆ ಮೈಮನಸ್ಯ ಬೆಳೆದು ಪ್ಯಾಲಸ್ತೀನಿನಲ್ಲಿದ್ದ. ನಾರ್ಮಂಡಿನ ಪ್ರಭುವಾಗಿದ್ದ ತನ್ನ ಹಿರಿಯ ಸಹೋದರ ರಾಬರ್ಟ್ ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿರುವಾಗ ತಾನು ರಾಜನಾಗುವ ಸಂಭವ ಕಡಮೆ ಎಂದು ತಿಳಿದ ಇವನು, ಕೂಡಲೆ ತಾನು ಪಟ್ಟಾಭಿಷಿಕ್ತನಾದರೆ ತನ್ನನ್ನು ಯಾರೂ ಕದಲಿಸಲಾರರೆಂದು ಆಲೋಚಿಸಿ ತರಾತುರಿಯಲ್ಲಿ ಸಿಂಹಾಸನವನ್ನೇರಿದ (1100). ಆಡಳಿತವನ್ನು ಚೆನ್ನಾಗಿ ತಿಳಿದಿದ್ದ ಇವನು ತನ್ನ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಪ್ರಜೆಗಳ ಒಲವನ್ನು ಗಳಿಸಲು ಬಹಳ ಶ್ರಮಿಸಿದ. ಆಡಳಿತಕ್ಕೆ ಬಂದ ಸ್ವಲ್ಪ ಸಮಯದಲ್ಲಿ ರ್ಯಾನ್ ಉಲ್ಫ್ ಫ್ಲೆಂಬರ್ಡ್‍ನನ್ನು ಓಡಿಸಿ ಸುಭದ್ರ ಸರ್ಕಾರವನ್ನು ಸ್ಥಾಪಿಸಿದ. ಇವನು ಹೊರಡಿಸಿದ ರಾಜಶಾಸನ (ಚಾರ್ಟರ್) ಮುಖ್ಯವಾದುದು. ಇವನು ಎಡ್ಮಂಡ್ ಐರನ್ ಸೈಡನ ಮೊಮ್ಮಗಳಾದ ಮ್ಯಾಟಿಲ್ಡಳನ್ನು ವಿವಾಹವಾಗಿದ್ದ. ಸ್ಯಾಕ್ಸನ್ ಮನೆತನಕ್ಕೆ ಸೇರಿದ ಮ್ಯಾಟಿಲ್ಡಳ ವಿವಾಹದಿಂದ ನಾರ್ಮನ್‍ರಿಗೂ ಮತ್ತು ಸ್ಯಾಕ್ಸನ್‍ರಿಗೂ ಇದ್ದ ಮನಸ್ತಾಪ ಕಡಮೆಯಾಯಿತು. ಇವನ ಕಾಲದಲ್ಲಿ ಕ್ಯೂರಿಯಾರಿಜಿಸ್ ಎಂಬ ಆಡಳಿತ ಸಭೆ ಅಭಿವೃದ್ಧಿಹೊಂದಿತು. ರಾಜನ ನ್ಯಾಯಾಲಯಕ್ಕೆ ಸೇರಿದ ನ್ಯಾಯಾಧಿಪತಿಗಳು ರಾಜನಿಗೆ ಸಂಬಂಧಪಟ್ಟ ಹಣಕಾಸಿನ ವ್ಯವಹಾರಗಳೇ ಮೊದಲಾದ ವಿಷಯಗಳನ್ನು ನಿಷ್ಕರ್ಷಿಸಲು ಆಗಾಗ್ಗೆ ಊರುಗಳ ನ್ಯಾಯಾಲಯಕ್ಕೆ ಭೇಟಿ ಕೊಡುತ್ತಿದ್ದರು. ಇವನು ಸೈನಿಕ ವೃತ್ತಿಯಲ್ಲಿ ಪ್ರಬಲರಾಗಿದ್ದ ಶ್ರೀಮಂತರ ಪ್ರಾಮುಖ್ಯವನ್ನು ಕೊನೆಗೊಳಿಸಿ ಆಡಳಿತದಲ್ಲಿ ನುರಿತ ಶ್ರೀಮಂತ ಗುಂಪೊಂದನ್ನು ರೂಪಿಸಿದ. ಇವನ ಕಾಲದಲ್ಲಿ ಸರ್ಕಾರಕ್ಕೂ ಚರ್ಚಿಗೂ ಬಿಕ್ಕಟ್ಟು ಪ್ರಾರಂಭವಾಗಿ ಅನಂತರ ಬಗೆಹರಿಯಿತು. ಅದರಂತೆ ಮಠಾಧಿಪತಿಗಳನ್ನು (ಬಿಷಪ್ಸ್) ನೇಮಿಸುವುದರಲ್ಲಿ ಪೋಪನದೇ ಪರಮಾಧಿಕಾರವೆಂದೂ ಮಠಾಧಿಪತಿಗಳು ತಮ್ಮ ಆಸ್ತಿಗಳಿಗಾಗಿ ರಾಜನಿಗೆ ಅಧೀನರಾಗಿರಬೇಕೆಂದೂ ತೀರ್ಮಾನವಾಯಿತು. ನ್ಯಾಯಸಿಂಹ (ಲಯನ್ ಆಫ್ ಜಸ್ಟೀಸ್) ನೆಂದು ಪ್ರಸಿದ್ಧನಾಗಿದ್ದ ಇವನು 1135ರಲ್ಲಿ ನಿಧನಹೊಂದಿದ.

	ಹೆನ್ರಿ 2: 1133-89. ಇಂಗ್ಲೆಂಡಿನ ಸಿಂಹಾಸನವನ್ನೇರಿದ ಪ್ರಥಮ ಪ್ಲಾನ್ಟೆಗನೆಟ್ ರಾಜ (1154-89). ಇವನ ತಂದೆ ಜಿಯೊಫ್ರೇ ಪ್ಲಾನ್ಟಗನಿಸ್ಟ್. ಇವನು ಫ್ರಾನ್ಸಿನ ಲೆಮ್ಯಾನ್ಸ್ ಎಂಬಲ್ಲಿ ಜನಿಸಿದ (1133). ಇವನು ಸ್ಟಿಫನ್‍ನ ನಿಧನಾನಂತರ ಅಧಿಕಾರಕ್ಕೆ ಬಂದ (1154). ಇವನ ಪೂರ್ವಿಕನೊಬ್ಬ ಪ್ಲಾನ್ಟಗನಿಸ್ಟ್ ಎಂಬ ಒಂದು ವಿಧವಾದ ಕುರುಚಲು ಗಿಡದ ಗರಿಯನ್ನು ಮುಡಿಯಲ್ಲಿ ಧರಿಸುತ್ತಿದುದರಿಂದ ಈ ವಂಶಕ್ಕೆ ಮುಂದೆ ಪ್ಲಾನ್ಟಗನೆಟ್ ಎಂಬ ಹೆಸರು ಬಂದಿತು. ಇವನು ಒಂದನೆಯ ಹೆನ್ರಿಯ ಮಗಳು ಮ್ಯಾಟಿಲ್ಡಳನ್ನು ವಿವಾಹವಾದ್ದರಿಂದ ಫ್ರಾನ್ಸಿನ ನಾರ್ಮಂಡಿ ಆಂಜು ಮತ್ತು ಅಕ್ವೆಟೈನ್ ಎಂಬ ಪ್ರದೇಶಗಳು ಇವನಿಗೆ ಮದುವೆಯ ಬಳುವಳಿಯಾಗಿ ಸೇರಿದವು. ಇವನು ಅಧಿಕಾರಿಕ್ಕೆ ಬಂದ ಅನಂತರ ಅನೇಕ ಸುಧಾರಣೆಗಳನ್ನು ಜಾರಿಗೊಳಿಸಿದನಲ್ಲದೆ, ದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಸ್ಥಾಪಿಸಿದ. ಇವನ ಕಾಲದಲ್ಲಿ ಸರ್ಕಾರಕ್ಕೂ ಚರ್ಚಿಗೂ ಜಗಳ ಹೆಚ್ಚಾಯಿತು. ಇವನು ಪ್ರತಿಯೊಬ್ಬರಿಗೂ ಒಂದೇ ಬಗೆಯ ನ್ಯಾಯ ದೊರೆಯುವಂತೆ ಮಾಡಲು ಒಲವುಳ್ಳವನಾಗಿದ್ದ. ಪಾದ್ರಿಗಳು ಯಾವುದೇ ಅಪರಾಧಗಳನ್ನು ಮಾಡಿದರೂ ಮತೀಯ ನ್ಯಾಯಾಲಯಗಳಲ್ಲಿ ಇವರಿಗೆ ಅಲ್ಪಪ್ರಮಾಣದ ಶಿಕ್ಷೆಗಳಾಗುತ್ತಿದ್ದವು. ಇದರಿಂದ ರಾಜನ ಅಧಿಕಾರಕ್ಕೆ ಧಕ್ಕೆಯುಂಟಾಯಿತು. ಇವನು ತನ್ನ ಆಡಳಿತದಲ್ಲಿ ಥಾಮಸ್ ಬೆಕೆಟ್ ಎಂಬ ಸ್ನೇಹಿತನನ್ನು ಚಾನ್ಸಲರ್ ಹುದ್ದೆಗೇರಿಸಿದ (1154). ಬೆಕೆಟ್‍ನು ವ್ಯಾಪಾರ, ವ್ಯವಹಾರ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಪರಿಣತಿ ಪಡೆದಿದ್ದು, ಸಾಮ್ರಾಜ್ಯದ ಪ್ರಗತಿಗಾಗಿ ಶ್ರಮಿಸಿದ. ಇವನನ್ನು ಕ್ಯಾಂಟರ್‍ಬರಿಯ ಮಹಾಮಠಾಧಿಪತಿಯಾಗಿ ನೇಮಿಸಲಾಯಿತು. ಅನಂತರ ಇವನು ತನ್ನ ಜೀವನಶೈಲಿಯನ್ನು ಬದಲಾಯಿಸಿಕೊಂಡು ಮತೀಯ ಜೀವನದಲ್ಲಿ ಆಸಕ್ತಿ ಹೊಂದಿ ತನ್ನ ಹಿಂದಿನ ಭೋಗಮಯ ಜೀವನವನ್ನು ತ್ಯಜಿಸಿದ. ಆದಕಾರಣ ಇವರಿಬ್ಬರಲ್ಲಿ ವಿರಸ ತಲೆದೋರಿತು. ಇವನ ಕ್ಲಾರೆಂಡನ್ನಿನ ಸಂವಿಧಾನ ಜಾರಿಗೊಳಿಸಿದ(1164). ಇದರಿಂದ ರಾಜನಿಗೂ ಬೆಕೆಟ್‍ನಿಗೂ ಜಗಳ ನಡೆದು ಸ್ವಲ್ಪದಿನ ಬೆಕೆಟ್ ಇಂಗ್ಲೆಂಡಿಗೆ ಹೋದ. ಅನಂತರ ರಾಜನ ಅನುಯಾಯಿಗಳು ಬೆಕೆಟನನ್ನು ಕೊಲೆಮಾಡಿದರು. ಬೆಕೆಟ್ ಸಮಾಜದಲ್ಲಿ ಪ್ರಭಾವಶಾಲಿಯಾಗಿದ್ದ. ಈ ಕೃತ್ಯದಿಂದ ರಾಜನಿಗೆ ಪ್ರಯೋಜನಕ್ಕಿಂತಲೂ ಅಪಾಯವೇ ಹೆಚ್ಚಾಯಿತು. 

	ಇವನ ಕೊಲೆ ಸಮಾಜದಲ್ಲಿ ಅತ್ಯಂತ ಪ್ರಭಾವ ಬೀರಿತು. ಸಮಾಜದಲ್ಲಿ ಜನ ಇವನನ್ನು ದೈವತ್ವಕ್ಕೆ ಏರಿಸಿದ್ದರು. ಇದರಿಂದ ರಾಜ ತನಗೆ ಅವಮಾನವಾಯಿತೆಂದುಕೊಂಡಿದ್ದ. ಹೆನ್ರಿ ನ್ಯಾಯಾಡಳಿತದಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೊಳಿಸಿದ. ಜ್ಯೂರಿ ಪದ್ಧತಿಯನ್ನು ಆಚರಣೆಗೆ ತಂದ. ಈತ ಈ ಪದ್ಧತಿಯನ್ನು ಆಡಳಿತಕ್ಕೂ ಆರ್ಥಿಕ ವ್ಯವಹಾರಕ್ಕೂ ಬಳಸಿಕೊಂಡ. ಆದ್ದರಿಂದ ಇವನನ್ನು ಜ್ಯೂರಿ ಪದ್ಧತಿಯ ಮತ್ತು ನ್ಯಾಯಾಸ್ಥಾನಗಳ ತಂದೆ ಎಂದು ಕರೆಯಲಾಗಿದೆ. ಇವನು ಸ್ಕೂಟೇಜ್ ಎಂಬ ತೆರಿಗೆಯನ್ನು ಶ್ರೀಮಂತರ ಮೇಲೆ ವಿಧಿಸಿ ಅವರ ಪ್ರಾಬಲ್ಯವನ್ನು ಕಡಮೆ ಮಾಡಿದ್ದ (1159). ಇವನು ಆಯುಧಗಳ ರಾಜ ಶಾಸನವನ್ನು ಹೊರಡಿಸಿದ್ದರಿಂದ(1181) ಪ್ರತಿಯೊಬ್ಬ ಸ್ವತಂತ್ರನಾದ ವ್ಯಕ್ತಿಯು ಯುದ್ಧಕ್ಕಾಗಿ ಆಯುಧಗಳನ್ನು ಇಟ್ಟುಕೊಳ್ಳುವ ಅವಕಾಶ ದೊರೆಯಿತು. ಇವನು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯವನ್ನು ಸು.1100ರಲ್ಲಿ ಸ್ಥಾಪಿಸಿದ. ಇವನು 1189ರಲ್ಲಿ ನಿಧನ ಹೊಂದಿದ.

	ಹೆನ್ರಿ 3-1: 1017-56. ಜರ್ಮನಿಯ ಪವಿತ್ರ ರೋಮನ್ ಸಾಮ್ರಾಟ. ಇವನ ತಂದೆ ಎರಡನೆಯ ಕಾನ್ರಾಡ್. ಇವನು ತನ್ನ ತಂದೆಯ ಆಡಳಿತಾವಧಿಯಲ್ಲಿ ಭಾಗಿಯಾಗಿ ಜಂಟಿ ಆಡಳಿತವನ್ನು ನಡೆಸಿದ (1028-39). ಅನಂತರ ಏಕಚಕ್ರವರ್ತಿಯಾಗಿ 1046ರಲ್ಲಿ ಸಿಂಹಾಸನವೇರಿದ. ಇವನ ಅಧಿಕಾರಾವಧಿಯಲ್ಲಿ ನಡೆದ ನೋಬಲ್‍ಗಳ ಅಂತರ್‍ಯುದ್ಧವನ್ನು ಯಶಸ್ವಿಯಾಗಿ ಹತ್ತಿಕ್ಕಿದ. ಇವನು ಉತ್ತರ ಹಾಗೂ ಪೂರ್ವ ಗಡಿಯುದ್ಧಗಳಲ್ಲಿ ಜಯಪಡೆದು ತನ್ನ ಸಾಮ್ರಾಜ್ಯವನ್ನು ಹಂಗರಿವರೆಗೂ ವಿಸ್ತರಿಸಿದ. ಚರ್ಚ್ ಮತ್ತು ಚಕ್ರವರ್ತಿಯ ನಡುವೆ ಅಧಿಕಾರಕ್ಕಾಗಿ ಪೈಪೋಟಿ ನಡೆಯಿತು. ಇವನು ಪ್ರಗತಿ ಸುಧಾರಣೆಗಳಲ್ಲಿ ನಂಬಿಕೆ ಇರುವ ಪೋಪ್‍ನನ್ನು ಚರ್ಚಿಗೆ ನೇಮಿಸಿದ. ಇವನು 1056ರಲ್ಲಿ ನಿಧನಹೊಂದಿದ. 

	ಹೆನ್ರಿ 3-2: 1551-89. ಫ್ರಾನ್ಸ್‍ನ ವಲಾಯ್ಸ್ ವಂಶದ ಕೊನೆಯ ರಾಜ. ಇವನು ಫ್ರಾನ್ಸಿನ ಫ್ಲಾಂಟಸಿಬ್ಲೂನಲ್ಲಿ ಜನಿಸಿದ. ಇವನ ತಾಯಿ ಕ್ಯಾಥರೀನ್ ಡೆಮೆ ಡಿಕ್ಸ್. ಸಹೋದರ 9ನೆಯ ಚಾಲ್ರ್ಸ್‍ನ ಅನಂತರ ಈತ ಅಧಿಕಾರಿಕ್ಕೆ ಬಂದ (1574). ಇವನೊಬ್ಬ ಅದಕ್ಷರಾಜನಾಗಿದ್ದ. ಇವನ ಕಾಲದಲ್ಲಿ ರೋಮನ್ ಕ್ಯಾಥೊಲಿಕ್ ಹಾಗೂ ಫ್ರಾನ್ಸಿನ ಪ್ರಾಟಸ್ಟೆಂಟರ ನಡುವೆ ಹೋರಾಟ ನಡೆಯಿತು. ಇವನು ಮತ್ತು ಇವನ ತಾಯಿ ಬೀಯೂಲಿಯು ರಾಜಾಜ್ಞೆಗೆ ಅನುಮೋದಿಸಿದರು. ಇವನು 1589ರಲ್ಲಿ ನಿಧನಹೊಂದಿದ.

	ಹೆನ್ರಿ 3-3: 1206-72. ಇಂಗ್ಲೆಂಡಿನ ರಾಜ (1216-72). ಇವನ ತಂದೆ ಜಾನ್. ತಂದೆಯ ನಿಧನಾನಂತರ ಇವನು ಅಧಿಕಾರಕ್ಕೆ ಬಂದ (1216). ಆಗ ಇವನಿಗೆ ಹತ್ತು ವರ್ಷವಯಸ್ಸಾಗಿತ್ತು. ಇವನ ಪ್ರಮುಖ ಅಧಿಕಾರಿಗಳಾದ ಅರ್ಲ್‍ಆಫ್ ಪೆಮ್ಬ್ರೋಕ್ (ವಿಲಿಯಂ ಮಾರ್ಷಲ್), ಆರ್ಲ್ ಆಫ್ ವೈಸೆಸ್ಟರ್ (ಸೈಮನ್ ಡಿಮಾಂಟ್ ಫೋರ್ಟ್) ಮತ್ತು ಹ್ಯುಬರ್ಟ್ ಡಿಬರ್ಲ್ ಇವರು ರಾಜಪ್ರತಿನಿಧಿಯಾಗಿ ಸುಭದ್ರ ಸರ್ಕಾರ ಸ್ಥಾಪನೆಗೆ ಪ್ರಯತ್ನಿಸಿದರು. ಈತ ನಾಮಕಾವಸ್ಥೆಯ ರಾಜನಾಗಿದ್ದ. ಇವನ ಕಾಲದಲ್ಲಿ ವಾಸ್ತವವಾಗಿ ಈ ಮೂವರೇ ಇಂಗ್ಲೆಂಡಿನ ರಾಜರಾಗಿದ್ದರು. ಇವನು ರಾಜ್ಯವನ್ನು ಸುಭದ್ರಗೊಳಿಸಲು ಬಹಳ ಶ್ರಮಿಸಿದ. ಪೆಮ್ಬ್ರೋಕ್ ಹೊರದೇಶದ ಸೈನಿಕರನ್ನೆಲ್ಲ ಓಡಿಸಿ ರಾಜ್ಯದಲ್ಲಿ ಶಾಂತಿ ಸ್ಥಾಪನೆ ಮಾಡಿ 1219ರಲ್ಲಿ ನಿಧನಹೊಂದಿದ. ಹೆನ್ರಿ ವಿದೇಶಿಯ ರನ್ನು ಹೆಚ್ಚಾಗಿ ಪ್ರೋತ್ಸಾಹಿಸಿದುದರಿಂದ ಅನೇಕ ಶ್ರೀಮಂತರು ಇವನ ವಿರುದ್ಧ ತಿರುಗಿಬಿದ್ದರು. ಇವರಲ್ಲಿ ಚರ್ಚಿನ ಮುಖಂಡನಾದ ಗ್ರಾಸ್‍ಟೆಸ್ಟ್ ಮುಂತಾದವರು ಮುಖ್ಯರು. ಹೆನ್ರಿ ಆಕ್ಸ್‍ಫರ್ಡ್‍ನಲ್ಲಿ ಸಭೆ ಸೇರಿ ಕೆಲವು ಸುಧಾರಣೆಗಳನ್ನು ಜಾರಿಗೊಳಿಸಿದ. ಆದರೆ ಅನಂತರದಲ್ಲಿ ಪೋಪನಿಗೂ ಇವನಿಗೂ ಹೊಂದಾಣಿಕೆ ಆಗದೆ ಇಂಗ್ಲೆಂಡಿನಲ್ಲಿಯುದ್ಧ ಪ್ರಾರಂಭ ವಾಯಿತು. ಇವನು ಮತ್ತು ಇವನ ಮಗ ಎಡ್ವರ್ಡ್, ಸೈಮನ್ ಡಿಮಾಂಟ್ ಫರ್ಡ್ ಎಂಬವನಿಗೆ ಸೆರೆಸಿಕ್ಕಿದರು. ಹೆನ್ರಿ ದುರ್ಬಲನೂ ಅವಿವೇಕಿಯೂ ಆಗಿದ್ದ. ಆಡಳಿತದಲ್ಲಿ ಅನುಭವವಿರಲಿಲ್ಲ, ಸುಖಲೋಲು ಪನಾಗಿದ್ದ. ಪ್ರಜೆಗಳ ಮೇಲೆ ಅಧಿಕ ತೆರಿಗೆ ವಿಧಿಸಿ, ಅವಕೃಪೆಗೆ ಪಾತ್ರನಾಗಿದ್ದ. ವೆಸ್ಟ್‍ಮಿನಿಸ್ಟರ್ ಅಬೆ ಚರ್ಚಿನ ನಿರ್ಮಾಣ ಇವನ ಕಾಲದ ಪ್ರಮುಖ ಸಾಧನೆ. ಇವನು 1272ರಲ್ಲಿ ನಿಧನಹೊಂದಿದ. 

	ಹೆನ್ರಿ 4-1: 1366-1413. ಇಂಗ್ಲೆಂಡಿನ ಲಂಕಾಸ್ಟರ್ ಮನೆತನದ ಪ್ರಥಮ ದೊರೆ(1399). ಇವನ ತಂದೆ ಜಾನ್ ಆಫ್ ಗಾಂಟ್ (ಡ್ಯೂಕ್ ಆಫ್ ಲಂಕಾಸ್ಟರ್) ಬಾಲಿಂಗ್ ಬ್ರೋಕ್ ಎಂಬ ಕೋಟೆಯಲ್ಲಿ ಜನಿಸಿದ್ದರಿಂದ ಇವನನ್ನು ಹೆನ್ರಿ ಆಫ್ ಬಾಲಿಂಗ್ ಬ್ರೊಕ್ ಎಂದು ಕರೆಯುತ್ತಿದ್ದರು. ಇವನು ತನ್ನ ದಾಯಾದಿ ಎರಡನೆಯ ರಿಚರ್ಡ್‍ನಿಂದ ಬಲವಂತವಾಗಿ ಅಧಿಕಾರವನ್ನು ಕಸಿದುಕೊಂಡು ಸಿಂಹಾಸನವನ್ನೇರಿದ (1399). ಇವನ ಕಾಲದಲ್ಲಿ ಅನೇಕ ಯುದ್ಧಗಳು ಸಂಭವಿಸಿದವು. ಈತ ಅನೇಕ ಸಾಮಾಜಿಕ ಸುಧಾರಣೆಗಳನ್ನೂ ಜಾರಿಗೊಳಿಸಿದ. ಇವನ ಅಂತಿಮದಿನಗಳಲ್ಲಿ ಅನಾರೋಗ್ಯದಿಂದ ನರಳಿದ. ಇವನು 1413ರಲ್ಲಿ ನಿಧನಹೊಂದಿದ. 

	ಹೆನಿ 4-2: 1553-1610. ಫ್ರಾನ್ಸಿನ ಬೌರ್ಬನ್ ವಂಶದ ಪ್ರಥಮರಾಜ (1589-1610). ಇವನು ಫ್ರಾನ್ಸಿನ ಪಾವ್ ಎಂಬಲ್ಲಿ ಜನಿಸಿದ (1553). ಇವನು ಮೂರನೆಯ ಹೆನ್ರಿಯ ತಂಗಿ ಮಾರ್ಗರೇಟ್‍ಡೆ ವಲಾಯ್ಸ್ ಎಂಬಾಕೆಯನ್ನು ವಿವಾಹವಾದರೂ ಸಂತಾನವಿರಲಿಲ್ಲವಾಗಿ  ವಿಚ್ಛೇದನ ಪಡೆದ(1599). ಅನಂತರ ಫ್ಲಾರೆನ್ಸ್‍ನ ಪ್ರಸಿದ್ಧ ಮೆಡಿಸಿ ಮನೆತನದ ಮೇರಿ ಡಿ ಮೆಡಿಸಿ ಎಂಬಾಕೆಯನ್ನು ವಿವಾಹವಾದ(1600). ಈ ದಂಪತಿಗಳಿಗೆ ಗುಂಡುಮಗುವೊಂದು ಜನಿಸಿತು (ಮುಂದಿನ 13ನೆಯ ಲೂಯಿ). ಇವನು ಫ್ರಾನ್ಸಿನಲ್ಲಿ ವಲಾಯ್ಸ್ ಮನೆತನದ ಆಡಳಿತವನ್ನು ಕೊನೆಗೊಳಿಸಿದ. ಇವನು ಪ್ಯಾರಿಸಿನ ರೂಪವನ್ನು ಬದಲಾಯಿಸಿದ. ಇವನ ಪೂರ್ಣಗೊಳಿಸಿದ ಪಾಂಟ್ ನ್ಯೂಫ್ (ಹೊಸ ಸೇತುವೆ) ಪ್ಯಾರಿಸಿನ ಜೀವನ ಕೇಂದ್ರವಾಯಿತು. ಇವನು ಎರಡೂ ದಂಡೆಗಳ ಮೇಲಿನ ನಗರಭಾಗ ಮತ್ತು ಹತ್ತಿರದ ಪ್ರದೇಶಗಳನ್ನು ಪುನಃ ರೂಪಿಸಿದನಲ್ಲದೆ, ನಗರಕ್ಕೆ ನೀರು ಒದಗಿಸುವ ವ್ಯವಸ್ಥೆಯನ್ನು ಮಾಡಿದ. ಇವನ ಕಾಲದಲ್ಲಿ ಫ್ರೆಂಚ್ ಪ್ರಾಟೆಸ್ಟೆಂಟ್‍ರಾದ ಹುಗೆನಾಟರಿಗೂ ರೋಮನ್ ಕ್ಯಾಥೊಲಿಕರಿಗೂ ಅಂತರ್‍ಯುದ್ಧ ಸಂಭವಿಸಿತು. ಇವನ ತಾಯಿ ಹುಗೆನಾಟ್ ಪಂಗಡಕ್ಕೂ ತಂದೆ ಕ್ಯಾಥೊಲಿಕ್ ಪಂಗಡಕ್ಕೂ ಸೇರಿದವರಾದ್ದರಿಂದ ಇವನು ತನ್ನ ಜೀವನದಲ್ಲಿ ಆರು ಬಾರಿ ಒಂದೊಂದು ಪಂಗಡಕ್ಕೆ ಮತಾಂತರಗೊಂಡಿದ್ದ. ಈತ ರೋಮನ್ ಕ್ಯಾಥೊಲಿಕ್ ಪಂಗಡದ ಚರ್ಚ್ ಸ್ಥಾಪಿಸಿದ(1593). ಇವನ ಕಾಲದಲ್ಲಿ ಫ್ರಾನ್ಸ್ ಗಮನಾರ್ಹ ಪ್ರಗತಿ ಸಾಧಿಸಿತು. ಅಂತರ್‍ಯುದ್ಧದ ಕಾಲದಲ್ಲಿ ಸ್ಪೇನ್ ಮಧ್ಯಪ್ರವೇಶಿಸಿತು. ಈ ಸಂದರ್ಭದಲ್ಲಿ ಇವನಿಗೆ ಇಂಗ್ಲೆಂಡ್ ಮತ್ತು ಡಚ್ಚ್ ದೇಶಗಳು ಸಹಾಯ ಮಾಡಿದವು. ಆಧುನಿಕ ಯುರೋಪ್‍ನ ಧಾರ್ಮಿಕ ಕ್ಷೇತ್ರದಲ್ಲಿ ಧರ್ಮಸಹಿಷ್ಣುತೆಯನ್ನು ತಂದ ಈತ 1610ರಲ್ಲಿ ನಿಧನಹೊಂದಿದ. 

	ಹೆನ್ರಿ 4-3: 1050-1106. ಜರ್ಮನಿಯ ರಾಜ. ಇವನು ಜರ್ಮನಿಯ ರಾಜನಾಗಿ 1056ರಲ್ಲಿ ಅಧಿಕಾರಕ್ಕೆ ಬಂದು, 1084ರಲ್ಲಿ ಪವಿತ್ರ ರೋಮನ್ ಸಾಮ್ರಾಟನಾದ. ಮೂರನೆಯ ಹೆನ್ರಿಯ ಕಾಲದಲ್ಲಿ ಆರಂಭವಾದ ಚರ್ಚ್ ಮತ್ತು ಚಕ್ರವರ್ತಿಯ ನಡುವಣ ಅಧಿಕಾರದ ಪೈಪೋಟಿ ಇವನ ಕಾಲದಲ್ಲಿ ತೀವ್ರವಾಯಿತು. ಆರಂಭದ ದಿನಗಳಲ್ಲಿ ಇವನ ಆಳಿಕೆ ಶಿಥಿಲವಾಗಿದ್ದುದರಿಂದ ಅನೇಕ ಶ್ರೀಮಂತರು ಸ್ವತಂತ್ರರಂತೆ ವರ್ತಿಸತೊಡಗಿ ದರು. ಪೇಪಲ್ ವರ್ಗದ ಪ್ರತಿರೋಧ ತೀವ್ರವಾಗಿತ್ತು. ಪ್ರಾಪ್ತ ವಯಸ್ಕನಾದ ಅನಂತರ ದಕ್ಷಿಣ ಜರ್ಮನಿ ಪ್ರದೇಶದ ನೋಬಲ್‍ಗಳ ಸಹಕಾರದಿಂದ ಕ್ರಮೇಣ ತನ್ನ ಆಡಳಿತವನ್ನು ಭದ್ರಪಡಿಸಲು ಪ್ರಯತ್ನಿಸಿದ. 1073ರ ವೇಳೆಗೆ ಸ್ಯಾಕ್ಸನ್ ನೋಬಲ್‍ಗಳು ಅತೃಪ್ತಗೊಂಡು ದಂಗೆಯೆದ್ದರು. ದಕ್ಷಿಣ ಜರ್ಮನಿ ಪ್ರದೇಶದ ನಾಯಕರ ಸಹಕಾರದಿಂದ ದಂಗೆಯನ್ನಡಗಿಸಲು ಕಾರ್ಯೋನ್ಮುಖನಾಗಿ 1075ರ ವೇಳೆಗೆ ಅದನ್ನಡಗಿಸಿದ. ಅನಂತರ ಸ್ವಲ್ಪಕಾಲದಲ್ಲಿ ಪೋಪ್ 7ನೆಯ ಗ್ರಿಗರಿಗೂ ಇವನಿಗೂ ಹಗೆತನ ಆರಂಭವಾಗಿ ಗ್ರಿಗರಿಯ ಅಪ್ಪಣೆಯ ಮೇರೆಗೆ ಇವನಿಗೆ ದಕ್ಷಿಣ ಜರ್ಮನಿಯ ನೋಬಲ್ ಸಹಕಾರ ತಪ್ಪಿತು. ಇವನ ಮೇಲೆ ಪೋಪ್ ಬಹಿಷ್ಕಾರ ಘೋಷಿಸಿದನಲ್ಲದೆ ರೈನ್‍ಫೀಲ್ಡನ್ನಿನ ರುಢಾಲ್ಫ್‍ನನ್ನು ರಾಜನೆಂದು ಘೋಷಿಸಿದ. ಈ ಸಂದಿಗ್ಧ ಸಮಯದಲ್ಲಿ ಸ್ಯಾಕ್ಸನ್ ಮತ್ತು ಜರ್ಮನ್ ನೋಬಲ್‍ಗಳು ಪರಸ್ಪರ ವಿರೋಧಿಗಳಾಗು ವಂತೆ ಇವನು ಸಂಚು ಹೂಡಿದ. ಇವನ ಮತ್ತು ಪೋಪ್ ಅನುಯಾಯಿಗಳ ನಡುವೆ 20 ವರ್ಷಗಳ ಕಾಲ ಘರ್ಷಣೆ ಮುಂದುವರಿಯಿತು. ಈ ನಡುವೆ 1080ರಲ್ಲಿ ರುಢಾಲ್ಫ್ ನಿಧನಹೊಂದಿದ. ಜರ್ಮನರು ಈ ಘರ್ಷಣೆಗಳಿಂದ ಬೇಸತ್ತು ಇವನ ಪಕ್ಷವನ್ನೇ ಸೇರಿದರು. ಕಾಲಕ್ರಮೇಣ ಜರ್ಮನಿಯ ಸಾಮಂತರು ಪ್ರಬಲರಾಗಿ ಚಕ್ರವರ್ತಿ ಮತ್ತು ಪೋಪನ ಮಧ್ಯವರ್ತಿಗಳಾದರು. ಇವನ ಮತ್ತು ಪೋಪನ ನಡುವೆ ತಲೆದೋರಿದ್ದ ಮೈಮನಸ್ಯ ಪರಸ್ಪರ ಒಡಂಬಡಿಕೆಯಿಂದ ಅಂತ್ಯ ಗೊಂಡಿತು. ಇವನು ಯುದ್ಧ ಸಿದ್ಧತೆಯಲ್ಲಿರುವಾಗಲೇ ನಿಧನಹೊಂದಿದ (1106). 

	ಹೆನ್ರಿ 5: 1387-1422. ಇಂಗ್ಲೆಂಡಿನ ರಾಜ (1413-22). ಇವನ ತಂದೆ ನಾಲ್ಕನೆಯ ಹೆನ್ರಿ. ಇವನು ವೇಲ್ಸ್‍ನ ಮನ್‍ಮೌತ್ ಎಂಬಲ್ಲಿ ಜನಿಸಿದ. 1413ರಲ್ಲಿ ಅಧಿಕಾರಕ್ಕೆ ಬಂದ. ಶಿಸ್ತಿನ, ನೇರ ಸ್ವಭಾವದ ಸಮರ್ಥ ದೊರೆಯಾದ ಇವನು ಪ್ರಜೆಗಳ ವಿಶ್ವಾಸವನ್ನು ಗಳಿಸಿ ಕ್ರೈಸ್ತದೊರೆಗಳಲ್ಲಿ ಕಿರೀಟ ಪ್ರಾಯನೆನಿಸಿದ. ಏಜಿನ್‍ಕೋರ್ಟ್ ಯುದ್ಧದಲ್ಲಿ ಫ್ರಾನ್ಸಿನ ವಿರುದ್ಧ ಹೋರಾಡಿ ಫ್ರಾನ್ಸ್‍ನ್ನು ಪಡೆದ. ಇವನ ಪ್ರಮುಖ ಸೈನಿಕ ಸಾಧನೆ (1415). ಟ್ರಾಯ್ಸ್ ಒಪ್ಪಂದದಂತೆ ಇವನು ಫ್ರಾನ್ಸ್‍ನ ಸಿಂಹಾಸನದ ಉತ್ತರಾಧಿಕಾರಿಯೆಂದೂ ಫ್ರಾನ್ಸಿನ ರಾಜ ಆರನೆಯ ಚಾಲ್ರ್ಸ್‍ನ ಮಗಳು ಕ್ಯಾಥರೀನಳನ್ನು ವಿವಾಹವಾಗಬೇಕೆಂದೂ ಒಪ್ಪಂದವಾಯಿತು (1420). ಮೂರನೆಯ ಎಡ್ವರ್ಡ್‍ನ ಕಾಲದಲ್ಲಿ ಫ್ರಾನ್ಸ್‍ನೊಂದಿಗೆ ಪ್ರಾರಂಭವಾಗಿದ್ದ ನೂರು ವರ್ಷಗಳ ಯುದ್ಧ ಇವನ ಕಾಲದಲ್ಲೂ ಮುಂದುವರಿಯಿತು. ಇವನು ಸಂಪ್ರದಾಯ ವಿರೋಧಿಗಳಿಗೆ ತೊಂದರೆ ಕೊಡುವುದು ಧಾರ್ಮಿಕ ಕಾರ್ಯಗಳಲ್ಲೊಂದೆಂದು ಭಾವಿಸಿದ್ದ. ಲೊಲಾಡ್ರ್ಸ್‍ರ ಬಗ್ಗೆ ಕ್ರೂರವಾಗಿ ವರ್ತಿಸಿದ. ಇವನು 1422ರಲ್ಲಿ ನಿಧನ ಹೊಂದಿದ.

	ಹೆನ್ರಿ 6-1: 1421-71. ಇಂಗ್ಲೆಂಡಿನ ಲಂಕಾಸ್ಟಕ್ ವಂಶದ ಕೊನೆಯ ರಾಜ ಹಾಗೂ ಐದನೆಯ ಹೆನ್ರಿಯ ಉತ್ತರಾಧಿಕಾರಿ. ತಾಯಿ ಕ್ಯಾಥರೀನ್. ಇಂಗ್ಲೆಂಡಿನ ಸಮೀಪದ ವಿಂಡ್ಸರ್ ಎಂಬಲ್ಲಿ ಜನಿಸಿದ(1421). ತನ್ನ ತಂದೆಯ ನಿಧನಾನಂತರ ಒಂದು ವರ್ಷದ ಮಗುವಾಗಿರುವಾಗಲೇ ಸಿಂಹಾಸನವೇರಿದ. ಅಪ್ರಪ್ತ ವಯಸ್ಕನಾದುದರಿಂದ ತನ್ನ ಸೋದರ ಮಾವಂದಿರಾದ ಡ್ಯೂಕ್ ಆಫ್ ಗ್ಲಾಸ್ಟರ್ ಮತ್ತು ಡ್ಯೂಕ್ ಆಫ್ ಬೆಡ್‍ಫೋರ್ಡರು ಕ್ರಮವಾಗಿ ಇಂಗ್ಲೆಂಡ್ ಮತ್ತು ಫ್ರಾನ್ಸ್‍ನಲ್ಲಿ ಇವನ ಪ್ರತಿನಿಧಿಗಳಾಗಿ ಅಧಿಕಾರ ನಡೆಸುತ್ತಿದ್ದರು. ಸಮರ್ಥ ರಾಜನಿಗಿರಬೇಕಾದ ಗತ್ತು, ಗಾಂಭೀರ್ಯಗಳಿಲ್ಲದ ಸೌಮ್ಯ ಸ್ವಭಾವದವನಾಗಿದ್ದ. ಸೈನಿಕ ಸಾಧನೆಗಳಲ್ಲಿ ಒಲವಿರದೇ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದ. ಇವನು ಫ್ರಾನ್ಸಿನ ಮಾರ್ಗರೇಟ್‍ಳನ್ನು ವಿವಾಹವಾಗಿದ್ದ. ಹಿಂದೆ ಆರಂಭವಾಗಿದ್ದ ನೂರು ವರ್ಷಗಳ ಯುದ್ಧ ಇವನ ಕಾಲದಲ್ಲೂ ಮುಂದುವರಿಯಿತು. ಇವನ ಮಡದಿ ಫ್ರಾನ್ಸಿನವಳಾದ್ದರಿಂದ ಅವಳಿಗೆ ಯುದ್ಧ ಬೇಡವಾಗಿತ್ತು. ಲಂಕಾಸ್ಟ್ರಿಯನ್ ಪಂಗಡಕ್ಕೆ ಯುದ್ಧ ಬೇಕಿತ್ತು. ಅಂತಿಮವಾಗಿ ಇಂಗ್ಲಿಷರಿಗೆ ನೂರು ವರ್ಷಗಳ ಯುದ್ಧದಲ್ಲಿ ಅಪಜಯವಾಯಿತು. ಬೆಡ್‍ಫೋರ್ಡ್ ಮತ್ತು ಗ್ಲೌಸ್ಟರರು ನಿಧನಹೊಂದಿದ ಅನಂತರ ಮಾರ್ಗರೇಟಳೇ ರಾಜ್ಯಕ್ಕೂ ರಾಜನಿಗೂ ಒಡತಿಯಾದಳು. ಮೂರನೆಯ ಎಡ್ವರ್ಡ್‍ನ ವಂಶದವನಾದ ಡ್ಯೂಕ್ ಆಫ್ ಯಾರ್ಕ್ ತಾನು ಈ ರಾಜ್ಯದ ಉತ್ತರಾಧಿಕಾರಿ ಎಂದು ಗಲಭೆ ಎಬ್ಬಿಸಿದ. ಮಾರ್ಗರೇಟಳು 1454ರಲ್ಲಿ ಮಗನನ್ನು ಪಡೆದ ಮೇಲೆ ಈ ಗಲಭೆ ಸ್ವಲ್ಪ ಶಮನಗೊಂಡಿತಾದರೂ ಮತ್ತೆ 1455ರಲ್ಲಿ ಗುಲಾಬಿಯುದ್ಧ ಪ್ರಾರಂಭವಾಗಿ 30 ವರ್ಷಗಳವರೆಗೆ ಹಂತ ಹಂತವಾಗಿ ನಡೆಯಿತು. ಲಂಕಾಸ್ಟ್ರಿಯನ್ ಮನೆತನದ ಅಧಿಕಾರವನ್ನು ಕೊನೆಗೊಳಿಸುವುದೇ ಯಾರ್ಕರ ಗುರಿಯಾಗಿತ್ತು. ಜೊತೆಗೆ ಫ್ರಾನ್ಸಿನೊಡನೆ ದೀರ್ಘಕಾಲ ಹೋರಾಡಿ ಇಂಗ್ಲಿಷರಿಗೆ ಬೇಸರವಾಗಿತ್ತು. ಇವನ ಮಗ ಅಧಿಕಾರಕ್ಕೆ ಬರಬೇಕಾದರೆ ಗುಲಾಬಿ ಯುದ್ಧ ಅನಿವಾರ್ಯವಾಗಿತ್ತು. (ಯಾರ್ಕರು ಬಿಳಿಗುಲಾಬಿಯನ್ನೂ ಲಂಕಾಸ್ಟ್ರಿಯನ್ನರು ಕೆಂಪು ಗುಲಾಬಿಯನ್ನೂ ತಮ್ಮ ಚಿಹ್ನೆಗಳಾಗಿ ಒಪ್ಪಿಕೊಂಡಿದ್ದರಿಂದ ಇವರ ನಡುವೆ ನಡೆದ ಯುದ್ಧಕ್ಕೆ ಗುಲಾಬಿ ಯುದ್ಧವೆಂದು ಹೆಸರು). ಈ ಯುದ್ಧದಲ್ಲಿ ಹೆನ್ರಿಯನ್ನು ಸೆರೆಹಿಡಿದು, ಡ್ಯೂಕ್ ಆಫ್ ಯಾರ್ಕ ಸಿಂಹಾಸನವನ್ನೇರಿದ (1460). ಆದರೆ ತನ್ನ ರಾಜ್ಯಕ್ಕೆ ಉತ್ತರಾಧಿಕಾರಿ ತನ್ನ ಮಗ ಇರುವಾಗ ಯಾರ್ಕ ಸಿಂಹಾಸನವೇರಿದುದನ್ನು ಸಹಿಸದ ಮಾರ್ಗರೇಟ್ ಯುದ್ಧಮಾಡಿ ಜಯಗಳಿಸಿದಳು. ಯಾರ್ಕನ ತಲೆಯನ್ನು ಕಡಿದು, ಕಾಗದದ ಕಿರೀಟವನ್ನು ತೊಡಿಸಿ ಯಾರ್ಕ್ ನಗರದ ಹೆಬ್ಬಾಗಿಲಲ್ಲಿ ನೇತುಹಾಕಿಸಿದಳು. ಆದರೆ ಡ್ಯೂಕ್ ಆಫ್ ಯಾರ್ಕ್‍ನ ಮಗ ನಾಲ್ಕನೆಯ ಎಡ್ವರ್ಡ್ ಇಂಗ್ಲೆಂಡಿಗೆ ಬಂದು, ಸರ್ವಾನುಮತದಿಂದ ರಾಜನಾಗಿ ಅಧಿಕಾರವಹಿಸಿಕೊಂಡು ಆರನೆಯ ಹೆನ್ರಿಯನ್ನು ಪದಚ್ಯುತಿಗೊಳಿಸಿದ. ಇವನನ್ನು ಬಹುಶಃ  ಎಡ್ವರ್ಡ ಹತ್ಯೆ ಮಾಡಿಸಿರಬಹುದು (1471) ಎನ್ನಲಾಗಿದೆ.

	ಹೆನ್ರಿ 6-2: (1165-97). ಜರ್ಮನ್ ಸಾಮ್ರಾಟ. ಇವನ ತಂದೆ ಒಂದನೆಯ ಫ್ರೆಡರಿಕ್. ಇವನು 1165ರಲ್ಲಿ ನಿಜ್‍ಮೆಜೆನ (ಈಗ ಇದು ನೆದರ್ಲೆಂಡ್‍ನಲ್ಲಿದೆ) ಎಂಬಲ್ಲಿ ಜನಿಸಿದ. ಬಾರ್ಬರಾಸ್ ಮನೆತನದವನಾದ ಇವನು ತನ್ನ ತಂದೆಯ ಉತ್ತಾರಾಧಿಕಾರಿಯಾಗಿ (1190), ಅನಂತರ ಪವಿತ್ರ ರೋಮನ್ ಸಾಮ್ರಾಟನಾದ(1192). ಜರ್ಮನಿಯಲ್ಲಿ ನಡೆದ ಅಂತರ್‍ಯುದ್ಧದಲ್ಲಿ ಭಾಗಿಯಾಗಿದ್ದ. ಇವನು ಇಂಗ್ಲೆಂಡಿನ ಮೇಲೆ ಯುದ್ಧಮಾಡಿ ಅಲ್ಲಿನ ರಾಜ ಒಂದನೆಯ ರಿಚರ್ಡ್‍ನನ್ನು ಒತ್ತಯಾಳಾಗಿಟ್ಟುಕೊಂಡು ಅನಂತರ ಬಿಡುಗಡೆಗೊಳಿಸಿದ (1194). ಇದರಿಂದ ಇವನು ಇಂಗ್ಲೆಂಡಿನ ಮೇಲೆ ಪ್ರಭುತ್ವ ಸಾಧಿಸಿದ. ಇವನು ತನ್ನ ಸಾಮ್ರಾಜ್ಯವನ್ನು ಸಿಸಿಲಿವರೆಗೆ ವಿಸ್ತರಿಸಿದ. ಧರ್ಮಯುದ್ಧ ದಂತೆ ಇವನು ಮೆಡಿಟರೇನಿಯನ್ ಸಮುದ್ರ ತೀರದ ಪೂರ್ವದಿಕ್ಕಿನ ಭೂಮಿಯನ್ನು ತನ್ನ ವಶಕ್ಕೆ ತೆಗೆದುಕೊಂಡು ಲಾಭಗಳಿಸಬೇಕೆಂಬ ಉದ್ದೇಶವನ್ನು ಹೊಂದಿದ್ದ. ಆದರೆ ಮಲೇರಿಯ ರೋಗದಿಂದ ನಿಧನಹೊಂದಿದ(1197).

	ಹೆನ್ರಿ 7: 1457-1509. ಇಂಗ್ಲೆಂಡಿನ ಟ್ಯೂಡರ್ ಮನೆತನದ ಮೊದಲ ರಾಜ. ಇವನ ತಂದೆ ಎಡ್ಮಂಡ್ ಟ್ಯೂಡರ್. ಇವನು ವೇಲ್ಸ್‍ನ ಪೆಮ್‍ಬ್ರೋಕ್‍ನಲ್ಲಿ ಜನಿಸಿದ (1457). ತನ್ನ 29ನೆಯ ವಯಸ್ಸಿನಲ್ಲಿ ಇವನು ಯುದ್ಧಭೂಮಿಯಲ್ಲಿದ್ದಾಗಲೇ ಇಂಗ್ಲೆಂಡಿನ ಸಿಂಹಾಸನವನ್ನೇರಿದ  ಯಾರ್ಕ್ ದೇಶದ ನಾಲ್ಕನೆಯ ಎಡ್ವರ್ಡ್‍ನ ಮಗಳು ಎಲಿಜಬೆತ್‍ಳನ್ನು ವಿವಾಹವಾದ ಅನಂತರ ಈ ಅಧಿಕಾರ ಸ್ಥಿರವಾಯಿತು. ಈ ವಿವಾಹ ಕೆಂಪು ಮತ್ತು ಬಿಳಿಗುಲಾಬಿ ಎರಡು ಮನೆತನಗಳ  ಹಗೆತನವನ್ನು ಕಡಮೆಗೊಳಿಸಿತು. ಇದರ ಸಂಕೇತವಾಗಿ ಇವನು ಅರ್ಧ ಬಿಳಿ ಮತ್ತು ಅರ್ಧ ಕೆಂಪು ಮಿಶ್ರಿತ ಗುಲಾಬಿಯನ್ನು ತನ್ನ ಲಾಂಛನವನ್ನಾಗಿ ಮಾಡಿಕೊಂಡ. ಇವನು ಯಾರ್ಕರನ್ನು ದ್ವೇಷಿಸುತ್ತಿದ್ದುದರಿಂದ ಅವರ ವಂಶದವಳೇ ಆದ ತನ್ನ ಹೆಂಡತಿ ಎಲಿಜಬೆತ್‍ಳಲ್ಲಿ ಹೆಚ್ಚು ಪ್ರೀತಿ ಇರಲಿಲ್ಲದಿದ್ದರೂ ವ್ಯಾವಹಾರಿಕ ನಿಪುಣತೆಯಿಂದ ವ್ಯವಹರಿಸಿದ. ಪಿತೂರಿಗಾರರ ಹಾವಳಿಯಿಂದ ಅನೇಕ ತೊಂದರೆಗಳನ್ನು ಅನುಭವಿಸಿದ. ದೇಶದ ಅಭಿವೃದ್ಧಿಗಾಗಿ ಅನೇಕ ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸಿದ. ಇವನು ವೆಸ್ಟ್‍ಮಿನಿಸ್ಟರ್‍ನಲ್ಲಿ ಚೇಸಾರ್‍ಟೆಂಬರ್ ಕೋರ್ಟನ್ನು ಸ್ಥಾಪಿಸಿದ (ಈ ನ್ಯಾಯಾಲಯದ ಕೊಠಡಿಯ ಪ್ರಾಂಗಣದ ಒಳಛಾವಣಿ ನಕ್ಷತ್ರಗಳಿಂದ ಅಲಂಕೃತವಾದ್ದರಿಂದ ಇದು ಸ್ಟಾರ್‍ಚೇಂಬರ್ ಎಂದು ಹೆಸರಾಯಿತು). ಇವನು ವಾಣಿಜ್ಯ ಮತ್ತು ವಿದೇಶಾಂಗ ನೀತಿಗಳಲ್ಲಿ ಸುಧಾರಣೆ ತಂದ. 1485ರಲ್ಲಿ ನ್ಯಾವಿಗೇಷನ್ ಆಕ್ಟ್‍ನ್ನು ಜಾರಿಗೆ ತಂದ. ವ್ಯಾಪಾರಕ್ಕೂ ಯುದ್ಧಕ್ಕೂ ಅನೇಕ ಹಡಗುಗಳನ್ನು ನಿರ್ಮಿಸಿದ. ತನ್ನ ವಿದೇಶಾಂಗ ನೀತಿಯಲ್ಲಿ ಇತರ ಯೂರೋಪಿನ ರಾಷ್ಟ್ರಗಳು ಅನುಸರಿಸುತ್ತಿದ್ದಂತೆಯೇ ತಾನು ಅಂತಾರಾಷ್ಟ್ರೀಯ ವಿವಾಹಗಳಲ್ಲಿ ಭಾಗವಹಿಸಿ ಇಂಗ್ಲೆಂಡಿನ ವ್ಯಕ್ತಿತ್ವವನ್ನು ಹೆಚ್ಚಿಸಬೇಕೆಂಬ ಅಭಿಲಾಷೆಯುಳ್ಳವನಾಗಿದ್ದ. ತನ್ನ ಹಿರಿಯ ಮಗ ಆರ್ಥರ್ ಎಂಬವನಿಗೆ ಸ್ಪೇನಿನ ಇಸಬೆಲ ಮತ್ತು ಫರ್ಡಿನಾಂಡ್‍ರ ಮಗಳು ಕ್ಯಾಥೆರೀನ್ ಆಫ್ ಆರಗಾನ್‍ಳನ್ನು ವಿವಾಹ ಮಾಡಿಸಿದ. ಸ್ಕಾಟ್ಲೆಂಡಿನ ಮೈತ್ರಿಯನ್ನು ಸಂಪಾದಿಸಲು ಹಿರಿಯ ಮಗಳು ಮಾರ್ಗರೆಟಳನ್ನು ನಾಲ್ಕನೆಯ ಜೇಮ್ಸ್‍ನಿಗೆ ಕೊಟ್ಟು ವಿವಾಹ ಮಾಡಿಸಿದ(1502). ಇವನು ಬೊಕ್ಕಸ ತುಂಬಲು ಅನೇಕ ದೇಶಗಳ ಮೇಲೆ ಯುದ್ಧ ಮಾಡಿ ಸಂಪತ್ತನ್ನು ಹೆಚ್ಚಿಸಿಕೊಂಡ. ಇವನ ಆಳಿಕೆಯನ್ನು ಚಿಕಿತ್ಸೆ ಮತ್ತು ಬಿತ್ತನೆಯಕಾಲ ಎಂದು ಕರೆಯಲಾಗಿದೆ. ಇವನ ಕಾಲದಲ್ಲಿ ಇಂಗ್ಲೆಂಡಿನಲ್ಲಿ ನವೋದಯ ತಲೆದೋರಿ, ಹೆಚ್ಚಿನ ಪ್ರಗತಿಗೆ ನಾಂದಿಯಾಯಿತು.
ಹೆನ್ರಿ 8: 1491-1547. ಇಂಗ್ಲೆಂಡಿನ ಪ್ರಸಿದ್ಧ ಹಾಗೂ ಸಮರ್ಥರಾಜ. ಇವನ ತಂದೆ ಏಳನೆಯ ಹೆನ್ರಿ. ಇವನು ಇಂಗ್ಲೆಂಡಿನ ಸಮೀಪದ ಗ್ರೀನ್‍ವಿಚ್ ಎಂಬಲ್ಲಿ ಜನಿಸಿದ(1491). ಸಿಂಹಾಸನಕ್ಕೆ ಬಂದಾಗ ಇವನಿಗೆ 17 ವರ್ಷ ವಯಸ್ಸು (1509). ಇವನು ಸ್ಪೇನನ್ನು ಉಳಿಸಿಕೊಳ್ಳಲು ತನ್ನ ವಿಧವೆ ಅತ್ತಿಗೆ ಕ್ಯಾಥರಿನಳನ್ನು ವಿವಾಹವಾದ. ಸುಂದರಕಾಯದ, ನಗುಮುಖದವನಾದ ಇವನನ್ನು ನೋಡಿದವರು ಮುಂದೆ ಇವನು ಕ್ರೂರಿಯೂ ಕಠಿಣ ಮನಸ್ಕನೂ ಆಗುವನೆಂದು ಊಹಿಸಿರಲಿಲ್ಲ. ಇವನ 1509 ರಿಂದ 29ರವರೆಗಿನ ಆಡಳಿತದಲ್ಲಿ ಥಾಮಸ್‍ವುಲ್ಸಿ ಎಂಬಾತ ಮುಖ್ಯಪಾತ್ರ ವಹಿಸಿದ. ಥಾಮಸ್‍ವುಲ್ಸಿ ಇಂಗ್ಲೆಂಡಿನ ವಿದೇಶಾಂಗ ನೀತಿಯನ್ನು ರೂಪಿಸಿದ. ಇಂಗ್ಲೆಂಡ್, ಯುರೋಪಿನ ರಾಷ್ಟ್ರಗಳ ಮಧ್ಯೆ ಉತ್ತಮ ಸ್ಥಾನ ಪಡೆಯಲು ಶ್ರಮಿಸಿದ. ವುಲ್ಸಿಯ ವಿದೇಶಾಂಗ ನೀತಿಯಗುಣ, ಯಾವ ಯುರೋಪಿನ ರಾಷ್ಟ್ರವೂ ಹೆಚ್ಚು ಪ್ರಾಬಲ್ಯದಿಂದ ಕೂಡಿರದೆ, ಒಂದೇ ತೂಕದಲ್ಲಿರುವಂತೆ ಮಾಡಬೇಕೆಂಬುದೇ ಆಗಿತ್ತು. ಇದನ್ನು ಬ್ಯಾಲೆನ್ಸ್ ಆಫ್ ಪವರ್ ಎಂದು ಕರೆಯಲಾಗಿದೆ. ಇವನು ಫ್ರಾನ್ಸಿನ ಮೇಲೆ ಯುದ್ಧ ಮಾಡಿದ. ಮತಧರ್ಮದ ವಿಚಾರದಲ್ಲಿ ಇಂಗ್ಲೆಂಡಿನಲ್ಲಿ ಅನೇಕ ಬದಲಾವಣೆಗ ಳಾದವು. ಇವನು ತನ್ನ ಮೊದಲ ಹೆಂಡತಿ ಕ್ಯಾಥರೀನ್ ಆಫ್ ಆರಿಗಾನಿನಳೊಂದಿಗೆ ವಿಚ್ಛೇದನ ಪಡೆದು ಆಸ್ಥಾನದ ಆನ್ ಬೋಲಿನ್‍ಳನ್ನು ವಿವಾಹವಾಗಬಯಸಿದ. ಆದರೆ ಇದಕ್ಕೆ ಪೋಪ್ ಅನುಮತಿ ನೀಡಲಿಲ್ಲ. ಇದರಿಂದ ಇವನು ಪೋಪನನ್ನೇ ಧಿಕ್ಕರಿಸಿ ಇಂಗ್ಲೆಂಡಿನಲ್ಲಿ ಸ್ವತಂತ್ರ ಚರ್ಚನ್ನು ಸ್ಥಾಪಿಸಿದ. ಇವನು ಸಶಸ್ತ್ರ ಹಡಗಿನ ಪಡೆಯನ್ನು ಸ್ಥಾಪಿಸಿ ಇಂಗ್ಲೆಂಡ್ ಸಮುದ್ರದ ಸಾರ್ವಭೌಮತ್ವಗಳಿಸಲು ಅಡಿಗಲ್ಲು ಹಾಕಿದ. ಇವನು ಕ್ಯಾಥರೀನ್ ಆಫ್ ಆನ್‍ಗಾರಿ, ಆನಿಬೋಲಿಸ್, ಜೇನ್ ಸೇಮೂರ್, ಆನ್ ಆಫ್ ಕ್ಲೀವ್ಸ್, ಕ್ಯಾಥರೀನ್ ಹವರ್ಡ್ ಮತ್ತು ಕ್ಯಾಥರೀನ್ ಪಾರ್ ಎಂಬ ಆರು ಜನರನ್ನು ವಿವಾಹ ಮಾಡಿಕೊಂಡಿದ್ದ. ಟ್ಯೂಡರ್ ನಿರಂಕುಶ ಪ್ರಭುತ್ವದ ಪತಾಕೆಯನ್ನು ಎತ್ತಿಹಾರಿಸಿದನೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಇವನು 1547ರಲ್ಲಿ ನಿಧನಹೊಂದಿದ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
			
	(ಎಚ್.ಆರ್.ಡಿ.)